ನಮ್ಮ ಬಗ್ಗೆ

ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ
ಕತ್ತಲು ಕಳೆದು, ಮುಂಜಾನೆಯ ಸೂರ್ಯ ಮೂಡಣ ದಿಕ್ಕಿನಲ್ಲಿ ಅರಳುತ್ತಿದ್ದಂತೆ  ಯುವ ಪರ್ವತಾರೋಹಿಗಳ ತಂಡವೊಂದು ಉನ್ನತ ಶಿಖರವನ್ನೇರಲು ಪರ್ವತದ ಕಡೆಗೆ ಮುಖಮಾಡಿತ್ತು. ಶಿಖರದ ಉನ್ನತ ತುದಿಯನ್ನು ತಲುಪಲು ಆ ತಂಡಕ್ಕೆ ಒಗ್ಗಟ್ಟಿನ ತರಬೇತಿ ಹಾಗೂ ಮೇಲಕ್ಕೇರುತ್ತೇವೆಂಬ ಛಲ ಹಾಗೂ ಸಾಹಸ ಪ್ರವೃತ್ತಿಯ ಅಗತ್ಯವಿರುತ್ತದೆ. ಇಂಥ ತರಬೇತಿ ಹಾಗೂ ಸಾಹಸಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವುದಕ್ಕಾಗಿ ಹುಟ್ಟಿಕೊಂಡ ಸಂಸ್ಥೆ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ. ಕ್ರೀಡಾ ವಲಯದಲ್ಲಿ ಜೆತ್ನಾ ಎಂದೇ ಪ್ರಸಿದ್ಧಿ. ಸಾಹಸವನ್ನೇ ಸ್ಫೂರ್ತಿಯಾಗಿಸಿಕೊಂಡು, ದೇಶಕ್ಕಾಗಿ ಹೋರಾಡಿದ ಕೊಡಗಿನ ಯೋಧ ಜನರಲ್ ತಿಮ್ಮಯ್ಯ ಹೆಸರಿನಲ್ಲೇ ಸ್ಫೂರ್ತಿ ಇದೆ.  ಸಾಹಸ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದಲೇ  1989ರಲ್ಲಿ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯು ಸ್ಥಾಪನೆಗೊಂಡಿತು. ಯುವಕರಲ್ಲಿ ಸಾಹಸ  ಪ್ರವೃತ್ತಿಯನ್ನು ಬೆಳೆಸುವುದು, ಸಾಹಸ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕರ್ನಾಟಕ ಸರಕಾರ ಕ್ರೀಡಾ ಇಲಾಖೆಯ ಭಾಗವಾಗಿ ಈ ಸಂಸ್ಥೆಯನ್ನು ಹುಟ್ಟುಹಾಕಿತು. ಪರಿಸರ ಹಾಗೂ ರೋಚಕ ಸಾಹಸ ಕ್ರೀಡೆಗಳನ್ನು ಆಯೋಜಿಸಿ ಯುವಕರು ಅದರಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಕಳೆದ ಮೂರು ದಶಕಗಳಿಂದ ಜನರಲ್ ತಿಮ್ಮಯ್ಯ ಸಾಹಕ ಅಕಾಡೆಮಿಯು ಕರ್ನಾಟಕ ರಾಜ್ಯದಲ್ಲಿ ಸಾಹಸ ಕ್ರೀಡೆಗಳಿಗೆ ಎಲ್ಲ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತ ಬಂದಿದೆ. ನಿಸರ್ಗದ ಜತೆಗೆ ಮಾನವ ಸಂಬಂಧ  ಉತ್ತಮವಾಗಿರಬೇಕು ಎಂಬುದನ್ನು ಯುವಕರಿಗೆ ತಿಳಿಸುವುದೂ ಈ ಅಕಾಡೆಮಿಯ ಪ್ರಮುಖ ಗುರಿಯಾಗಿದೆ. ವಾಯು, ನೀರು ಹಾಗೂ ನೆಲ ಹೀಗೆ ಪ್ರತಿಯೊಂದು ಸಾಹಸ ಕ್ರೀಡೆಯಲ್ಲೂ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ತನ್ನನ್ನು ತೊಡಗಿಸಿಕೊಂಡಿದೆ. ಜತೆಯಲ್ಲಿ ರಕ್ಷಣೆಯ ಬಗ್ಗೆಯೂ ಪಾಠ ಹೇಳುತ್ತ ಬಂದಿದೆ. ಸಾಧಕನಿಗೆ ನಿಸರ್ಗದ ಜತೆಯಲ್ಲಿ ಕಲಿಯುವಿಕೆ, ರೋಚಕತೆ ಹಾಗೂ ಹೊಸತನ್ನು ಕಂಡುಕೊಳ್ಳುವ ಬಗ್ಗೆ ನೆರವು ನೀಡುತ್ತ ಬಂದಿದೆ ಹಾಗೂ ನೀಡುತ್ತಲೇ ಇದೆ.
Change this in Theme Options
Change this in Theme Options